ಭಟ್ಕಳ: ತಾಲೂಕಿನ ಸುಪ್ರಸಿದ್ದ ಮಾರಿ ಜಾತ್ರೆಯೂ ಬುಧವಾರದಂದು ಬೆಳಿಗ್ಗೆ 5.30ಕ್ಕೆ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು.
ಮಂಗಳವಾರದಂದು ರಾತ್ರಿ ಮಾರಿ ದೇವಿ ಮೂರ್ತಿಯ ತಯಾರಕ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆಯ ಬಳಿಕ ನಂತರ ಮಾರಿ ದೇವಿಯ ಮೂರ್ತಿಯನ್ನು ಮುಂಜಾನೆ ಮೆರವಣಿಗೆಯ ಮೂಲಕ ಕರೆತಂದು ಸಂಪ್ರದಾಯದಂತೆ ಜೈನ ಸಮುದಾಯದವರಿಂದ ಮಾರಿ ದೇವಿಗೆ ಮೊದಲ ಪೂಜೆ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಬಣೆಯಿಂದ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಭಟ್ಕಳ ತಾಲೂಕಿನ ಮಾರಿ ಜಾತ್ರೆಯು ಸಹ ಒಂದು. ಸುಮಾರು 25 ವರ್ಷಗಳ ಹಿಂದೆ ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತಿದ್ದ ವಿಶಿಷ್ಠ ಜಾತ್ರೆಯಾಗಿತ್ತು.
ಬುಧವಾರದಂದು ಮುಂಜಾನೆ ಕರೆತರಲಾದ ಮಾರಿದೇವಿಯ ಮೂರ್ತಿಯನ್ನು ಮಾರಿಕಾಂಬಾ ದೇವಿಯ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆ ಮಾರಿದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಕೋವಿಡ್ ಹಿನ್ನೆಲೆ ಕಳೆದ ಮೂರು ವರ್ಷಗಳ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ವಿಧಿ ವಿಧಾನಗಳ ಮೂಲಕ ಮಾರಿ ಜಾತ್ರೆ ಆಚರಿಸಿದ್ದು, ತದ ನಂತರ ಭಾರಿ ವಿಜೃಂಬಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಬುಧವಾರ ಮೊದಲನೇ ದಿನದಂದು ಪರ ಊರಿನವರು ಮನೆಯಲ್ಲಿ ಹಬ್ಬ ಆಚರಿಸಲಿದ್ದು, ಎರಡನೇ ದಿನವಾದ ಗುರುವಾರದಂದು ಸ್ಥಳೀಯರು ಹಬ್ಬ ಆಚರಿಸಲಿದ್ದಾರೆ. ಸಂಭ್ರಮದಿಂದ ಜರುಗುವ ಈ ಜಾತ್ರೆಯಲ್ಲಿ ಅಕ್ಕ ಪಕ್ಕದ ತಾಲೂಕಿನಿಂದಲು ಭಕ್ತರು ಬಂದು ದೇವಿಯ ಆಶೀರ್ವಾದ ಪಡೆದುಕೊಂಡರು.
ಮೊದಲ ದಿನವಾದ ಇಂದು ಸಾವಿರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದುಕೊಂಡರು.
ಮೊದಲ ದಿನವಾದ ಇಂದು ಭಕ್ತಾದಿಗಳಿಗೆ ಮಳೆ ಸ್ವಲ್ಪಪಡಿಸಿದರು ಸಹ ದೇವರ ದರ್ಶನ ಸರದಿ ಸಾಲಿನಲ್ಲಿ ನಿಂತು ಹಣ್ಣು ಕಾಯಿ ಜೊತೆಗೆ ಹರಕೆಯನ್ನು ತೀರಿಸಿ ಕ್ರತಾರ್ಥರಾದರು.
ಮಾರಿರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳು ಬಾರದೇ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುವುದು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದಾಗಿದ್ದು, ಈ ಬಾರಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಕೆ ತೀರಿಸಿದ್ದಾರೆ. ಪ್ರತಿ ವರ್ಷವೂ ಕೂಡಾ ತಮಗೆ ಬಂದ ಕಷ್ಟ ಕಾರ್ಪಣ್ಯಗಳು ದೂರಾಗಲಿ ಎಂದು ಹರಿಕೆ ಹೊತ್ತ ಭಕ್ತರು, ವಾರ್ಷಿಕ ಜಾತ್ರೆಯಲ್ಲಿ ಹರಿಕೆ ತೀರಿಸುವುದು ವಾಡಿಕೆಯಾಗಿದೆ.
ನಾಳೆ ಅಂದರೆ ಗುರುವಾರ ಸಂಜೆ 4.30ಕ್ಕೆ ಮಾರಿ ಮೂರ್ತಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮೂಲಕ ಕರಿಕಲ್ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಜಾತ್ರೆ ಹಿನ್ನೆಲೆ 2 ದಿನಗಳ ಕಾಲ ಪೊಲೀಸ ಬಿಗಿ ಬಂದೋಬಸ್ತ್ ಎರ್ಪಡಿಸಲಾಗಿದ್ದು ಮಾರಿ ಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಗೊಳ್ಳುವ ಮೊದಲು ಬಾಂಬ್ ನಿಷ್ಕ್ರಿಯ ದಳದಿಂದ ದೇವಸ್ಥಾನವನ್ನು ತಪಾಸಣೆ ಮಾಡಿದ ಬಳಿಕ ಮಾರಿ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು ಹಾಗೂ ದರ್ಶನಕ್ಕೆ ಬಂದಂತಹ ಭಕ್ತರನ್ನು ಕೂಡ ತಪಾಸಣೆ ಮಾಡಲಾಗುತ್ತದೆ.